ಪ್ರವೀಣಕುಮಾರ
	1947-. ಡಿಸ್ಕಸ್ ಹಾಗೂ ಹ್ಯಾಮರ್ ಎಸೆತದಲ್ಲಿ ದಾಖಲೆ ಸ್ಥಾಪಿಸಿರುವ ಭಾರತೀಯ. ಹುಟ್ಟಿದ್ದು ಅಮೃತಸರ ಜಿಲ್ಲೆಯ ಸರ್ ಹರಿಯ ಎಂಬಲ್ಲಿ (6-12-1947). ತಂದೆ ರೈತ. ಎರಡು ಮೀಟರ್‍ಗೂ ಎತ್ತರವುಳ್ಳ ದೃಢ ದೇಹದ ಈತ ಚಿಕ್ಕಂದಿನಿಂದಲೇ ವ್ಯಾಯಾಮ, ಕುಸ್ತಿ ಮತ್ತು ಭಾರ ಎತ್ತುವ ಹವ್ಯಾಸಗಳಲ್ಲಿ ಆಸಕ್ತ. ಮನೆಯಲ್ಲಿ ಇವಕ್ಕೆಲ್ಲ ಸಾಕಷ್ಟು ಪ್ರೋತ್ಸಾಹವಿತ್ತು. ಶಾಲೆಯಲ್ಲಿ ಬ್ಯಾಸ್ಕೆಟ್ ಬಾಲ್ ಆಡುತ್ತಿದ್ದರು. ಕಾಲೇಜಿನಲ್ಲಿ ಡಿಸ್ಕಸ್ ಮತ್ತು ಹ್ಯಾಮರ್ ಎಸೆಯುವುದನ್ನು ಕಲಿತರು. 1966ರಲ್ಲಿ ಏಷ್ಯನ್ ಕ್ರೀಡೋತ್ಸವದಲ್ಲಿ ಡಿಸ್ಕಸ್ ಎಸೆತದಲ್ಲಿ ಚಿನ್ನದ ಪದಕವನ್ನೂ ಸುತ್ತಿಗೆ ಎಸೆತದಲ್ಲಿ ಕಂಚಿನ ಪದಕವನ್ನೂ ಪಡೆದು ದಾಖಲೆ ಸ್ಥಾಪಿಸಿದರು. 1968ರಲ್ಲಿ 54.22 ಮೀಟರ್ ದೂರಕ್ಕೆ ಡಿಸ್ಕಸ್ ಅನ್ನೂ 62.12 ಮೀಟರ್ ದೂರಕ್ಕೆ ಹ್ಯಾಮರ್‍ಅನ್ನೂ ಎಸೆದು ರಾಷ್ಟ್ರೀಯ ದಾಖಲೆ ಸ್ಥಾಪಿಸಿರುವುರು.

	ಗಡಿ ಭದ್ರತಾ ಪಡೆಯಲ್ಲಿ ಪ್ರವೀಣಕುಮಾರ ಉದ್ಯೋಗಿಯಾಗಿರುವರು.
(ಎಸ್.ಎಚ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ